Saturday, September 15, 2012


                  ಹಿನ್ನೀರು
ನಾಲ್ಕು ದಿನದಿಂದ ಎಡಬಿಡದೆ ಸುರಿಯುತ್ತಿದ್ದ ಮಳೆಗೀಗ ಸ್ವಲ್ಪ ಬಿಡುವು. ಮಲೆನಾಡಿನ ಮಳೆಯೆಂದರೇ ಹಾಗೆ,ಯಾವಾಗಲೂ ಜಿಟಿ ಜಿಟಿ ."ಏನು ಹಾಳು ಮಳೆಯಪ್ಪಾ" ಎಂದು ಗೊಣಗುತ್ತ ಕೆಲವರು ಬಸ್ಸಿನಿಂದಿಳಿಯುತ್ತಿದ್ದರೆ,ಮಳೆ ಇನ್ನೂ ಜೋರು ಬರಲಿ ಎನ್ನುತ್ತ ಮನೆ ಕಡೆ ನಡೆದಳು ಅನಘ.
ಕೆಲಸದ ಆಯಾಸ ಮೈಯಲ್ಲಿತ್ತಾದರೂ  ಮಳೆಯಿಂದ ತೋಯ್ದ ಪ್ರಕೄತಿ,’ ನಾನು ಇಗೋ ಬಂದೆಎಂದು ಮಳೆಯ ಮುನ್ಸೂಚನೆಯನ್ನು ಕೊಡುತ್ತಿದ್ದ ಗುಡುಗುಮಿಂಚು ಅವಳ ನಡಿಗೆಯಲ್ಲಿ ಉತ್ಸಾಹವನ್ನು ಚಿಮ್ಮಿಸುತ್ತಿದ್ದವು. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ತಣ್ಣಗೆ ಕುಳಿತಿರುವ ಅತ್ತ ಪೇಟೆಯೂ ಅಲ್ಲದ,ಇತ್ತ ಹಳ್ಳಿಯೂ ಅಲ್ಲದ ಆ ಊರಿನ ಜನರಿಗೆ ,ಆ ಸಂಸ್ಕ್ರತಿಗೆ ಅಲ್ಲಿ  ಹರಿವ ಅಘನಾಶಿನಿಯೇ ಜೀವನಾಡಿ. ಅಘನಾಶಿನಿಯೇ ತಮ್ಮ ಮನೆಯಲ್ಲಿ ಹುಟ್ಟಿರುವಳೆಂಬ ನಂಬಿಕೆಯಿಂದ ಮಗಳಿಗೆ ಅನಘಎಂದು ನಾಮಕರಣ ಮಾಡಿದ್ದರು ಶಿವರಾಮ ಭಟ್ಟರು. ಅವಳು ವೄತ್ತಿಯಲ್ಲಿ ಪತ್ರಿಕೋದ್ಯಮಿಯಾದರೆ ,ಪ್ರವೃತ್ತಿಯಲ್ಲಿ ಪ್ರಕೃತಿ ಪ್ರಿಯಳು..

ನೆಪ ಮಾತ್ರಕ್ಕೆ ಛತ್ರಿ ಹಿಡಿದಿದ್ದರಿಂದ ಅವಳ ಮೈ ಸಂಪೂರ್ಣವಾಗಿ ತೋಯ್ದಿತ್ತು.ಚಿಕ್ಕಮಕ್ಕಳಂತೆ ಆಟವಾಡುತ್ತ ಬಂದ ಮಗಳನ್ನು ನೋಡಿ ಶಾಂತತ್ತೆ "ಏನೇ,ಸ್ವಲ್ಪ ಮಳೆ ನಿಂತ ಮೇಲೆ ಬಂದಿದ್ರೆನಾಗ್ತಿತ್ತು? ಎಂದು ಸಣ್ಣಗೆ ಗದರಿಕೊಂಡರು.ಅದು ಕೇಳಿಸಿಯೇ ಇಲ್ಲವೆನ್ನುವಂತೆ "ಅಮ್ಮ,ಸ್ವಲ್ಪ ಬಿಸಿ ಬಿಸಿ ಕಷಾಯ ಕೊಡೆ" ಎನ್ನುತ್ತ ಅಮ್ಮನನ್ನು ರಮಿಸುತ್ತ ಒಳನಡೆದಳು. ಪತ್ರಿಕೊದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ ಜಾಣೆ,ಧೈರ್ಯವಂತೆ ಎನಿಸಿಕೊಂಡಿದ್ದರೂ ಮನೆಯಲ್ಲಿ ಎಲ್ಲರ ಮುದ್ದಿನ ಕೂಸು ಅನಘ.

ಇತ್ತ ಜಗುಲಿಯ ಮೇಲೆ ಇನ್ನೊಂದು ತರದ ಚರ್ಚೆಯೇ ಸಾಗಿತ್ತು.ಶಿವರಾಮ ಭಟ್ಟರು,ಸುಬ್ರಾಯ ಭಟ್ಟರು, ಮನೆಯ ಆಳು ರಾಮ ಎಲ್ಲರದು  ಒಂದೇ ಚಿಂತೆ. ಇನ್ನು ೬ ತಿಂಗಳಲ್ಲಿ ಹುಟ್ಟಿ ಬೆಳೆದ ಊರನ್ನು ಬಿಡಬೇಕು. ಮಗುವಿನಂತೆ ಸಾಕಿದ ಅಡಿಕೆ ,ಬಾಳೆ ತೋಟಗಳೆಲ್ಲವೂ ಅಘನಾಶಿನಿಗೆ ಕಟ್ಟುವ ಆಣೆಕಟ್ಟಿನಿಂದಾಗಿ ಸಂಪೂರ್ಣ ಮುಳುಗಡೆಯಾಗುವುದರಲ್ಲಿತ್ತು.ಈಗೊಂದು ವರ್ಷದಿಂದೀಚೆಗೆ ಎಲ್ಲರ ಮನೆಯಲ್ಲೂ ಇದೇ ವಿಚಾರ."ಎಷ್ಟು ಹೋರಾಟ,ಸತ್ಯಾಗ್ರಹ ಮಾಡಿದ್ರೂ ಈ ಸರ್ಕಾರಕ್ಕೆ ನಮ್ಮ ಕಷ್ಟ ಅರ್ಥಾನೆ ಆಗಲ್ವಲ್ಲೊ...ಪರಿಹಾರ ಅಂತ ಸ್ವಲ್ಪ ಹಣಾನಾದ್ರು ಕೊಡ್ತಾರೆ ಅಂತ ಸಮಾಧಾನ ಪಟ್ಕೊಬೇಕು ಅಷ್ಟೆ "ಎಂದು ಸುಬ್ರಾಯ ಭಟ್ಟರು ದುಃಖದಿಂದ ನುಡಿದಾಗ ಶಿವರಾಮ ಭಟ್ಟರು"ಅಲ್ವೋ ,ಪರಿಹಾರ ಕೊಟ್ಟರೂ ಹುಟ್ಟೂರು ಬಿಟ್ಟು ಹೊಗೊದೆಲ್ಲಿಗೆ ಮಾರಾಯಾ..ಎಲ್ಲ ನಮ್ಮ ಹಣೆಬರಹ.."ಎಂದು ಪರಿಸ್ಥಿತಿಯನ್ನೆದುರಿಸಲು ಅಣಿಯಾಗುತ್ತಿದ್ದರು..

ಇತ್ತ ಅನಘ "ನಾನೊಂದು ಜೀವನದಿ..ಹೆಣ್ಣು ನನ್ನ ಹೆಸರು.."ಎಂದು ಹಾಡುತ್ತ "ಅಪ್ಪಾ,ಸೇತುವೆ ಬಳಿ ಹೊಗಿ ಬರ್ತಿ "ಎಂದು ಉತ್ತರಕ್ಕೂ ಕಾಯದೆ ಹೊರಟೆ ಬಿಟ್ಟಳು. ಚಿಕ್ಕಂದಿನಿಂದಲೂ ಅವಳ ಅಭ್ಯಾಸವನ್ನು ಬಲ್ಲ ಶಾಂತತ್ತೆ ಕೊಡೆ ತೆಗೆದುಕೊಂಡು ಹೋಗು ಎಂದು ಹೇಳುವ ಪ್ರಯತ್ನವನ್ನೂ ಮಾಡಲಿಲ್ಲ. ಕ್ಷರಶಃ ಜಿಗಿಯುತ್ತಲೆ ಸೇತುವೆ ಬಳಿ ಬಂದ ಅನಘ ಪ್ರೀತಿಯ ನೋಟವನ್ನು ಹರಿಸಿದಳು. ಅದು ಅಘನಾಶಿನಿಗೆ ಸಂಚಾರ ಯೋಗ್ಯವಾಗಿ ಕಟ್ಟಿದ ಸೇತುವೆ.ಬೇರೆ ಕಾಲದಲ್ಲಿ ವಾಹನ ಸಂಚಾರ ಇರಬಹುದಾದರೂ ಮಳೆಗಾಲದಲ್ಲಿ ಜನರೂ ವಾಹನಗಳು ಎರಡೂ ಅಷ್ಟಕ್ಕಷ್ಟೆ. ಪಕ್ಕದಲ್ಲೆ ಪುಟ್ಟ ದೇವಸ್ಥಾನ. ನದಿಯಾಗಿ ಹರಿಯುವ ಅಘನಾಶಿನಿ ಇಲ್ಲಿ ಮೂರ್ತಿ ಸ್ವರೂಪಿಣಿ.ಅಘನಾಶಿನಿ ಹೇಗೆ ಇರಲಿ, ಬತ್ತಿರಲಿಮೈತುಂಬಿ ಹರಿಯುತ್ತಿರಲಿ ಅದು  ಅವಳಲ್ಲಿ  ರೊಮಾಂಚನವನ್ನುಂಟುಮಾಡುತ್ತಿತ್ತು. ಈಗಲೂ ಹಾಗೆ..ಆಣೆಕಟ್ಟು ಕಟ್ಟುವ ವಿಚಾರದಲ್ಲಿ ಎಲ್ಲ ಹೋರಾಟಗಳು ಮುಗಿದು ಎಲ್ಲರೂ ಕೈಚೆಲ್ಲಿರುವಾಗ ತನ್ನೂರನ್ನು ಉಳಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದು ಇಲ್ಲಿಯೇ. ತನ್ನದೇ ಗುಂಪು ಕಟ್ಟಿಕೊಂಡು ಅಣೆಕಟ್ಟು ನಿರ್ಮಾಣದಿಂದಾಗುವ ಪರಿಸರ ನಾಶ,ಅಳಿವಿನಂಚಿನಲ್ಲಿರುವ ಜೀವಿಗಳ ಬಗ್ಗೆ,ಇಲ್ಲಿನ ವಿಭಿನ್ನ ಸಂಸ್ಕೃತಿಯ ಬಗ್ಗೆ ಅಂತರಾಷ್ಟ್ರೀಯ ವಿಜ್ಞಾನಿಗಳ ಸಹಾಯದಿಂದ ವರದಿ ತಯಾರಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ದೊರೆಯುವಂತೆ ಮಾಡುತ್ತಿರುವುದು ಸಾಮಾನ್ಯದ ಮಾತಲ್ಲ. ತನ್ನ ಕೆಲಸದ ಬಗ್ಗೆ ತೃಪ್ತಿ ಇದೆಯಾದರೂ ..ಎಲ್ಲೊ ಒಂದು ಕಡೆ ಅಣೆಕಟ್ಟು ನಿಮಾ೯ಣದಿಂದ ಲಾಭ ಪಡೆಯುವ ರಾಜಕಾರಣಿಗಳ ಕೆಂಗಣ್ಣು ತನ್ನ ಮೇಲಿದೆಯೇ ಎನ್ನುವ ಸಂಶಯ ಕಾಡದೇ ಇರಲಿಲ್ಲ. ಅವಳ ಯೋಚನಾ ಲಹರಿ ಹೀಗೆ ಸಾಗುತ್ತಿರುವಂತೆಯೇ ಅಘನಾಶಿನಿಯ ನೀರೂ ಉಕ್ಕತೊಡಗಿತ್ತು. ಕತ್ತಲೆಯ ಜೊತೆಗೆ ಮಳೆಯೂ ಜೊರಾಗಿತ್ತು. ದೂರದಲ್ಲೆಲ್ಲೊ ಏನೋ ವಾಹನ ಬರುವ ಸದ್ದು ಕೇಳುತ್ತಿತ್ತಾದರೂ ಅದು ತನ್ನ ಹತ್ತಿರಕ್ಕೆ ಬಂದು ತನ್ನನ್ನೇ ನದಿಗೆ ನೂಕಬಹುದೆಂದು  ಊಹಿಸಿಯೂ ಇರಲಿಲ್ಲ...

ಅಷ್ಟೇ..ಅಘನಾಶಿನಿ ತನ್ನ ಮಗಳನ್ನು ತನ್ನಲ್ಲಿಗೆ ಕರೆದುಕೊಂಡಿದ್ದಳು..ಹೋರಾಟದ ಕನಸು ಹೂವಾಗುವ ಮುನ್ನವೇ ಬಾಡಿತ್ತು.ತಮ್ಮ ದಾರಿಗೆ ಮುಳುವಾಗಿದ್ದವಳು ನಾಶವಾದ ಸಂತೋಷದಲ್ಲಿದ್ದವರ ನಗು ಗುಡುಗನ್ನೂ ಮೀರಿ ಕೇಳಿಸಿತ್ತು.ಮರುದಿನ ಪತ್ರಿಕೆಗಳಲ್ಲಿ " ಸಹೋದ್ಯೊಗಿಯೊಂದಿಗಿನ ಫಲಿಸದ ಪ್ರೇಮದಿಂದ ಯುವತಿಯ ಆತ್ಮಹತ್ಯೆ" ಎಂಬ ಚಿಕ್ಕ ತಲೆಬರಹ ಎಲ್ಲರ ಬಾಯನ್ನೂ ಮುಚ್ಚಿಸಿತ್ತು.ತನ್ನೂರಿಗಾಗಿ ತನ್ನನ್ನೇ ಬಲಿಕೊಟ್ಟ ಮಗಳಿಗಾಗಿ ಮೌನವಾಗಿ ಕಣ್ಣೀರು ಮಿಡಿಯುವುದೊಂದೆ ಶಾಂತತ್ತೆ,ಶಿವರಾಮ ಭಟ್ಟರಿಗಿದ್ದ ದಾರಿ.

ಹೇಳಿ....

ಈ ಕನಸನ್ನು ಕೊಂದ ಮನಸುಗಳಿಗೆ ಕಿಂಚಿತ್ತಾದರೂ ಮಾನವೀಯತೆ..
ಕಿಂಚಿತ್ತಾದರೂ ಪ್ರಕೄತಿಯ ಮೇಲೆ ಪ್ರೀತಿ ಇದೆಯೆ?
ನನ್ನವರಿಗಾಗಿ ನಾನು ಮಾಡಿದ್ದು ತಪ್ಪೆ?ಎಂದು ಅನಘ ಕೂಗಿ ಕೂಗಿ ಕೇಳುತ್ತಿದ್ದಾಳೆ..

ಉತ್ತರಿಸಲು ಯಾರಲ್ಲೂ ಉತ್ತರವಿಲ್ಲ....