Saturday, September 15, 2012


                  ಹಿನ್ನೀರು
ನಾಲ್ಕು ದಿನದಿಂದ ಎಡಬಿಡದೆ ಸುರಿಯುತ್ತಿದ್ದ ಮಳೆಗೀಗ ಸ್ವಲ್ಪ ಬಿಡುವು. ಮಲೆನಾಡಿನ ಮಳೆಯೆಂದರೇ ಹಾಗೆ,ಯಾವಾಗಲೂ ಜಿಟಿ ಜಿಟಿ ."ಏನು ಹಾಳು ಮಳೆಯಪ್ಪಾ" ಎಂದು ಗೊಣಗುತ್ತ ಕೆಲವರು ಬಸ್ಸಿನಿಂದಿಳಿಯುತ್ತಿದ್ದರೆ,ಮಳೆ ಇನ್ನೂ ಜೋರು ಬರಲಿ ಎನ್ನುತ್ತ ಮನೆ ಕಡೆ ನಡೆದಳು ಅನಘ.
ಕೆಲಸದ ಆಯಾಸ ಮೈಯಲ್ಲಿತ್ತಾದರೂ  ಮಳೆಯಿಂದ ತೋಯ್ದ ಪ್ರಕೄತಿ,’ ನಾನು ಇಗೋ ಬಂದೆಎಂದು ಮಳೆಯ ಮುನ್ಸೂಚನೆಯನ್ನು ಕೊಡುತ್ತಿದ್ದ ಗುಡುಗುಮಿಂಚು ಅವಳ ನಡಿಗೆಯಲ್ಲಿ ಉತ್ಸಾಹವನ್ನು ಚಿಮ್ಮಿಸುತ್ತಿದ್ದವು. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ತಣ್ಣಗೆ ಕುಳಿತಿರುವ ಅತ್ತ ಪೇಟೆಯೂ ಅಲ್ಲದ,ಇತ್ತ ಹಳ್ಳಿಯೂ ಅಲ್ಲದ ಆ ಊರಿನ ಜನರಿಗೆ ,ಆ ಸಂಸ್ಕ್ರತಿಗೆ ಅಲ್ಲಿ  ಹರಿವ ಅಘನಾಶಿನಿಯೇ ಜೀವನಾಡಿ. ಅಘನಾಶಿನಿಯೇ ತಮ್ಮ ಮನೆಯಲ್ಲಿ ಹುಟ್ಟಿರುವಳೆಂಬ ನಂಬಿಕೆಯಿಂದ ಮಗಳಿಗೆ ಅನಘಎಂದು ನಾಮಕರಣ ಮಾಡಿದ್ದರು ಶಿವರಾಮ ಭಟ್ಟರು. ಅವಳು ವೄತ್ತಿಯಲ್ಲಿ ಪತ್ರಿಕೋದ್ಯಮಿಯಾದರೆ ,ಪ್ರವೃತ್ತಿಯಲ್ಲಿ ಪ್ರಕೃತಿ ಪ್ರಿಯಳು..

ನೆಪ ಮಾತ್ರಕ್ಕೆ ಛತ್ರಿ ಹಿಡಿದಿದ್ದರಿಂದ ಅವಳ ಮೈ ಸಂಪೂರ್ಣವಾಗಿ ತೋಯ್ದಿತ್ತು.ಚಿಕ್ಕಮಕ್ಕಳಂತೆ ಆಟವಾಡುತ್ತ ಬಂದ ಮಗಳನ್ನು ನೋಡಿ ಶಾಂತತ್ತೆ "ಏನೇ,ಸ್ವಲ್ಪ ಮಳೆ ನಿಂತ ಮೇಲೆ ಬಂದಿದ್ರೆನಾಗ್ತಿತ್ತು? ಎಂದು ಸಣ್ಣಗೆ ಗದರಿಕೊಂಡರು.ಅದು ಕೇಳಿಸಿಯೇ ಇಲ್ಲವೆನ್ನುವಂತೆ "ಅಮ್ಮ,ಸ್ವಲ್ಪ ಬಿಸಿ ಬಿಸಿ ಕಷಾಯ ಕೊಡೆ" ಎನ್ನುತ್ತ ಅಮ್ಮನನ್ನು ರಮಿಸುತ್ತ ಒಳನಡೆದಳು. ಪತ್ರಿಕೊದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ ಜಾಣೆ,ಧೈರ್ಯವಂತೆ ಎನಿಸಿಕೊಂಡಿದ್ದರೂ ಮನೆಯಲ್ಲಿ ಎಲ್ಲರ ಮುದ್ದಿನ ಕೂಸು ಅನಘ.

ಇತ್ತ ಜಗುಲಿಯ ಮೇಲೆ ಇನ್ನೊಂದು ತರದ ಚರ್ಚೆಯೇ ಸಾಗಿತ್ತು.ಶಿವರಾಮ ಭಟ್ಟರು,ಸುಬ್ರಾಯ ಭಟ್ಟರು, ಮನೆಯ ಆಳು ರಾಮ ಎಲ್ಲರದು  ಒಂದೇ ಚಿಂತೆ. ಇನ್ನು ೬ ತಿಂಗಳಲ್ಲಿ ಹುಟ್ಟಿ ಬೆಳೆದ ಊರನ್ನು ಬಿಡಬೇಕು. ಮಗುವಿನಂತೆ ಸಾಕಿದ ಅಡಿಕೆ ,ಬಾಳೆ ತೋಟಗಳೆಲ್ಲವೂ ಅಘನಾಶಿನಿಗೆ ಕಟ್ಟುವ ಆಣೆಕಟ್ಟಿನಿಂದಾಗಿ ಸಂಪೂರ್ಣ ಮುಳುಗಡೆಯಾಗುವುದರಲ್ಲಿತ್ತು.ಈಗೊಂದು ವರ್ಷದಿಂದೀಚೆಗೆ ಎಲ್ಲರ ಮನೆಯಲ್ಲೂ ಇದೇ ವಿಚಾರ."ಎಷ್ಟು ಹೋರಾಟ,ಸತ್ಯಾಗ್ರಹ ಮಾಡಿದ್ರೂ ಈ ಸರ್ಕಾರಕ್ಕೆ ನಮ್ಮ ಕಷ್ಟ ಅರ್ಥಾನೆ ಆಗಲ್ವಲ್ಲೊ...ಪರಿಹಾರ ಅಂತ ಸ್ವಲ್ಪ ಹಣಾನಾದ್ರು ಕೊಡ್ತಾರೆ ಅಂತ ಸಮಾಧಾನ ಪಟ್ಕೊಬೇಕು ಅಷ್ಟೆ "ಎಂದು ಸುಬ್ರಾಯ ಭಟ್ಟರು ದುಃಖದಿಂದ ನುಡಿದಾಗ ಶಿವರಾಮ ಭಟ್ಟರು"ಅಲ್ವೋ ,ಪರಿಹಾರ ಕೊಟ್ಟರೂ ಹುಟ್ಟೂರು ಬಿಟ್ಟು ಹೊಗೊದೆಲ್ಲಿಗೆ ಮಾರಾಯಾ..ಎಲ್ಲ ನಮ್ಮ ಹಣೆಬರಹ.."ಎಂದು ಪರಿಸ್ಥಿತಿಯನ್ನೆದುರಿಸಲು ಅಣಿಯಾಗುತ್ತಿದ್ದರು..

ಇತ್ತ ಅನಘ "ನಾನೊಂದು ಜೀವನದಿ..ಹೆಣ್ಣು ನನ್ನ ಹೆಸರು.."ಎಂದು ಹಾಡುತ್ತ "ಅಪ್ಪಾ,ಸೇತುವೆ ಬಳಿ ಹೊಗಿ ಬರ್ತಿ "ಎಂದು ಉತ್ತರಕ್ಕೂ ಕಾಯದೆ ಹೊರಟೆ ಬಿಟ್ಟಳು. ಚಿಕ್ಕಂದಿನಿಂದಲೂ ಅವಳ ಅಭ್ಯಾಸವನ್ನು ಬಲ್ಲ ಶಾಂತತ್ತೆ ಕೊಡೆ ತೆಗೆದುಕೊಂಡು ಹೋಗು ಎಂದು ಹೇಳುವ ಪ್ರಯತ್ನವನ್ನೂ ಮಾಡಲಿಲ್ಲ. ಕ್ಷರಶಃ ಜಿಗಿಯುತ್ತಲೆ ಸೇತುವೆ ಬಳಿ ಬಂದ ಅನಘ ಪ್ರೀತಿಯ ನೋಟವನ್ನು ಹರಿಸಿದಳು. ಅದು ಅಘನಾಶಿನಿಗೆ ಸಂಚಾರ ಯೋಗ್ಯವಾಗಿ ಕಟ್ಟಿದ ಸೇತುವೆ.ಬೇರೆ ಕಾಲದಲ್ಲಿ ವಾಹನ ಸಂಚಾರ ಇರಬಹುದಾದರೂ ಮಳೆಗಾಲದಲ್ಲಿ ಜನರೂ ವಾಹನಗಳು ಎರಡೂ ಅಷ್ಟಕ್ಕಷ್ಟೆ. ಪಕ್ಕದಲ್ಲೆ ಪುಟ್ಟ ದೇವಸ್ಥಾನ. ನದಿಯಾಗಿ ಹರಿಯುವ ಅಘನಾಶಿನಿ ಇಲ್ಲಿ ಮೂರ್ತಿ ಸ್ವರೂಪಿಣಿ.ಅಘನಾಶಿನಿ ಹೇಗೆ ಇರಲಿ, ಬತ್ತಿರಲಿಮೈತುಂಬಿ ಹರಿಯುತ್ತಿರಲಿ ಅದು  ಅವಳಲ್ಲಿ  ರೊಮಾಂಚನವನ್ನುಂಟುಮಾಡುತ್ತಿತ್ತು. ಈಗಲೂ ಹಾಗೆ..ಆಣೆಕಟ್ಟು ಕಟ್ಟುವ ವಿಚಾರದಲ್ಲಿ ಎಲ್ಲ ಹೋರಾಟಗಳು ಮುಗಿದು ಎಲ್ಲರೂ ಕೈಚೆಲ್ಲಿರುವಾಗ ತನ್ನೂರನ್ನು ಉಳಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದು ಇಲ್ಲಿಯೇ. ತನ್ನದೇ ಗುಂಪು ಕಟ್ಟಿಕೊಂಡು ಅಣೆಕಟ್ಟು ನಿರ್ಮಾಣದಿಂದಾಗುವ ಪರಿಸರ ನಾಶ,ಅಳಿವಿನಂಚಿನಲ್ಲಿರುವ ಜೀವಿಗಳ ಬಗ್ಗೆ,ಇಲ್ಲಿನ ವಿಭಿನ್ನ ಸಂಸ್ಕೃತಿಯ ಬಗ್ಗೆ ಅಂತರಾಷ್ಟ್ರೀಯ ವಿಜ್ಞಾನಿಗಳ ಸಹಾಯದಿಂದ ವರದಿ ತಯಾರಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ದೊರೆಯುವಂತೆ ಮಾಡುತ್ತಿರುವುದು ಸಾಮಾನ್ಯದ ಮಾತಲ್ಲ. ತನ್ನ ಕೆಲಸದ ಬಗ್ಗೆ ತೃಪ್ತಿ ಇದೆಯಾದರೂ ..ಎಲ್ಲೊ ಒಂದು ಕಡೆ ಅಣೆಕಟ್ಟು ನಿಮಾ೯ಣದಿಂದ ಲಾಭ ಪಡೆಯುವ ರಾಜಕಾರಣಿಗಳ ಕೆಂಗಣ್ಣು ತನ್ನ ಮೇಲಿದೆಯೇ ಎನ್ನುವ ಸಂಶಯ ಕಾಡದೇ ಇರಲಿಲ್ಲ. ಅವಳ ಯೋಚನಾ ಲಹರಿ ಹೀಗೆ ಸಾಗುತ್ತಿರುವಂತೆಯೇ ಅಘನಾಶಿನಿಯ ನೀರೂ ಉಕ್ಕತೊಡಗಿತ್ತು. ಕತ್ತಲೆಯ ಜೊತೆಗೆ ಮಳೆಯೂ ಜೊರಾಗಿತ್ತು. ದೂರದಲ್ಲೆಲ್ಲೊ ಏನೋ ವಾಹನ ಬರುವ ಸದ್ದು ಕೇಳುತ್ತಿತ್ತಾದರೂ ಅದು ತನ್ನ ಹತ್ತಿರಕ್ಕೆ ಬಂದು ತನ್ನನ್ನೇ ನದಿಗೆ ನೂಕಬಹುದೆಂದು  ಊಹಿಸಿಯೂ ಇರಲಿಲ್ಲ...

ಅಷ್ಟೇ..ಅಘನಾಶಿನಿ ತನ್ನ ಮಗಳನ್ನು ತನ್ನಲ್ಲಿಗೆ ಕರೆದುಕೊಂಡಿದ್ದಳು..ಹೋರಾಟದ ಕನಸು ಹೂವಾಗುವ ಮುನ್ನವೇ ಬಾಡಿತ್ತು.ತಮ್ಮ ದಾರಿಗೆ ಮುಳುವಾಗಿದ್ದವಳು ನಾಶವಾದ ಸಂತೋಷದಲ್ಲಿದ್ದವರ ನಗು ಗುಡುಗನ್ನೂ ಮೀರಿ ಕೇಳಿಸಿತ್ತು.ಮರುದಿನ ಪತ್ರಿಕೆಗಳಲ್ಲಿ " ಸಹೋದ್ಯೊಗಿಯೊಂದಿಗಿನ ಫಲಿಸದ ಪ್ರೇಮದಿಂದ ಯುವತಿಯ ಆತ್ಮಹತ್ಯೆ" ಎಂಬ ಚಿಕ್ಕ ತಲೆಬರಹ ಎಲ್ಲರ ಬಾಯನ್ನೂ ಮುಚ್ಚಿಸಿತ್ತು.ತನ್ನೂರಿಗಾಗಿ ತನ್ನನ್ನೇ ಬಲಿಕೊಟ್ಟ ಮಗಳಿಗಾಗಿ ಮೌನವಾಗಿ ಕಣ್ಣೀರು ಮಿಡಿಯುವುದೊಂದೆ ಶಾಂತತ್ತೆ,ಶಿವರಾಮ ಭಟ್ಟರಿಗಿದ್ದ ದಾರಿ.

ಹೇಳಿ....

ಈ ಕನಸನ್ನು ಕೊಂದ ಮನಸುಗಳಿಗೆ ಕಿಂಚಿತ್ತಾದರೂ ಮಾನವೀಯತೆ..
ಕಿಂಚಿತ್ತಾದರೂ ಪ್ರಕೄತಿಯ ಮೇಲೆ ಪ್ರೀತಿ ಇದೆಯೆ?
ನನ್ನವರಿಗಾಗಿ ನಾನು ಮಾಡಿದ್ದು ತಪ್ಪೆ?ಎಂದು ಅನಘ ಕೂಗಿ ಕೂಗಿ ಕೇಳುತ್ತಿದ್ದಾಳೆ..

ಉತ್ತರಿಸಲು ಯಾರಲ್ಲೂ ಉತ್ತರವಿಲ್ಲ....  
Sunday, July 22, 2012


ದನಿ

  

ಕೋಗಿಲೆಯೊ೦ದು ಕೂಗುತಿದೆ..
ಮರದ ಮರೆಯಿ೦ದ...
ಪದಗಳೊ೦ದಿಗಿನ ಆಟವಲ್ಲ..
ಪ್ರತ್ಯುತ್ತರದ ಆಪೇಕ್ಷೆಯಿಲ್ಲ..
ಕೇಳಿಸಿಕೊಳ್ಳಲೆ೦ಬ ತುಡಿತವಿಲ್ಲ..
ಕೇಳುವವರಿಲ್ಲವೆ೦ಬ ದಿಗಿಲಿಲ್ಲ..
ಜಗವೇ ತನ್ನದೆ೦ಬ ದನಿಯಲ್ಲಿ
ಇಳಿಸ೦ಜೆಯ ಹೊಸ್ತಿಲಲ್ಲಿ
ಕೊನೆಯಿರದ ಭಾವ ಸ೦ಚಲನ..


ಕೋಗಿಲೆಯೊ೦ದು ಕೂಗುತಿದೆ..
ಮನದ ಮೂಲೆಯಿ೦ದ..
ಪದಗಳಿದ್ದರೂ ಅರ್ಥವಿಲ್ಲ..
ಉತ್ತರಕ್ಕೂ ಅಸ್ತಿತ್ವವಿಲ್ಲ..
ಕೇಳಿಸದಷ್ಟು ಕಿವುಡಲ್ಲ..
ಕೇಳದಿರುವಷ್ಟು ಕಠೋರವಲ್ಲ..
ಆದರೂ.. ನೀನಿಲ್ಲವೆ೦ಬ ಭಾವದಲ್ಲಿ..
ಗೊಧೂಳಿಯ ಹೊತ್ತಿನಲಿ
ಕೊನೆಯಿರದ ನೆನೆಪುಗಳ ಮ೦ಥನ..

Tuesday, July 5, 2011

ಇಸ್ತ್ರಿ ಪೆಟ್ಟಿಗೆ ಮತ್ತು maggiಇದೇನಿದು !ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಎಲ್ಲಿಗೆಲ್ಲಿಯ ಸಂಬಂಧ ಅನ್ಕೊಂಡ್ರಾ ??ನೀವು

maggi ಅಭಿಮಾನಿಯಾಗಿದ್ರೆ ಮು೦ದೆ ಓದಿ ನೋಡಿ.....

 
ನಾನು
ಪಿಯುಸಿ ಓದಿದ್ದು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ..ಅಲ್ಲಿ ನಮ್ಮ

ಅಂತ:ಪುರ ಅಂದ್ರೆ ಭಾಗೀರಥಿ ಲೇಡೀಸ್ ಹಾಸ್ಟೆಲ್ ಭೋಜನಾಲಯವೇನೋ

ಚೆನ್ನಾಗಿತ್ತು .ಆದ್ರೆ ನಮ್ಮದೊಡ್ಡ ಜಟರಾಲಯಕ್ಕೆಸಾಕಾಗ್ತ ಇರ್ಲಿಲ್ಲ.ಅದೂ ಅಲ್ದೆ

equation solve ಮಾಡಿ ಮಾಡಿ ,chemistry reactions ಬರೆದು ಬರೆದು ಸಾಕಾಗಿ

,ಏನಾದ್ರೂ ಹೊಸದು ಮಾಡೋದ್ರಲ್ಲಿ ತುಂಬಾ ಉತ್ಸಾಹ .ನಮ್ಮ ಸಿಡುಕು ವದನದ

wardenಗಳ್ಳನ್ನಾ(ಲಂಕಿಣಿ ,ಧಾಕಿನಿ ಅಂಪ್ರೀತಿಯಿಂದ!!ಕರಿತಿದ್ವಿ.)ಕಣ್ಣು ತಪ್ಪಿಸಿ

ಕಿತಾಪತಿ ಮಾಡೋದು ಅಂದ್ರೆ cet ನಲ್ಲಿ <೧೦೦ rank ತಗೊಂದಷ್ಟು ಖುಷಿ ..

..ಇವೆಲ್ಲದಕ್ಕೂಉತ್ತರವಾಗಿ ಕಂಡಿದ್ದೆ maggi maggi magggi ......
 

"ಇಂಗು ತೆಂಗು ಎದ್ರೆ ಮಂಗಮ್ಮನ ಅಡುಗೆನು ಚಂದ "ಅನ್ನೋ ತರಾ ಕುದಿತ ಇರೊ ನೀರಿಗೆ

maggi ಹಾಕಿ ನಿಮಿಷ ಬಿಟ್ರೆ ಬಿಸಿ ಬಿಸಿ maggi ರೆಡಿ ...ಆದ್ರೆ ನೀರು ಕಾಯಿಸೊದು ಹೇಗೆ?

ಅಲ್ಲಿ use ಆಗೋದೇ ಇಸ್ತ್ರಿ ಪೆಟ್ಟಿಗೆ...ಅದನ್ನ್ನ ಉಲ್ಟಾ ಇಟ್ಟು ಬೀಳದೆ ಇರಲಿ ಅಂತ ಕಡೆ ಎರಡು

, ಕಡೆ ಎರಡು ನಮ್ಮ ದಪ್ಪ cet books ಇಟ್ಟು ಕಾಯಕ್ಕೆ ಬಿಟ್ರೆ ಅರ್ಧ ಕೆಲಸ ಮುಗಿತಿತ್ತು...

cet books ಓದಿದ್ದಕ್ಕಿಂತ ಕೆಲಸಕ್ಕೆ ಜಾಸ್ತಿ use ಆಗಿದ್ಯೇನೋ..!! 


ಅದಿರಲಿ spoon , plate , glass ಇರೊ ನಮ್ಮ ಅಡುಗೆ ಮನೇಲಿ maggi ಮಾಡೋಕೆ

ಪಾತ್ರೇನ ಎಲ್ಲಿಂದ ತರೋದು? ಪಕ್ಕದ ರೂಂ ನವರಿಂದ ದೊಡ್ಡ ಪಾತ್ರೆ ತಂದರು ಅದು

ಕಾಯೊಷ್ಟರಲ್ಲಿ ನಮ್ಮ free hours ಮುಗದು study hours ಶುರು ಆಗ್ತಿತ್ತು..!!ಅದಕ್ಕೂ ಒಂದು (ಕು)ತಂತ್ರ

ಮಾಡ್ತಿದ್ವಿ..ನೀರು ತುಂಬಿದ ಉದ್ದ ಲೋಟಗಳನ್ನೇ ಇಸ್ತ್ರಿ ಪೆಟ್ಟಿಗೆ base ಮೇಲೆ ಇಟ್ಟು maggi ಹಾಕಿ..

ನಾವು ನೋಡದೆ ಹೋದ್ರೆ ಅದು ಬೇಯೋದೆ ಇಲ್ವೇನೋ ಅನ್ನೋ ತರಾ ಅದನ್ನೇ ದಿಟ್ಟಿಸ್ತಾ ಕೂರೋದು..

ಅಷ್ಟಕ್ಕೇ ಮುಗೀಲಿಲ್ಲ ..ಪರಿಮಳ ಬರುತ್ತಲ್ಲ ಅದಕ್ಕೇನು ಮಾಡೋಣ??warden ಗೆ ಗೊತ್ತಾದ್ರೆ

ಇಸ್ತ್ರಿ
ಪೆತ್ತಿಗೆನು seize ..ಜೊತೆಗೆ ನಮಗೂ ಬಿಸಿ ಬಿಸಿ ಬೈಗುಳ ಸಿಕ್ಕಿರೋದು..ಅದ್ಕೆ ರೂಂ lock ಮಾಡಿ

ಒಬ್ಳನ್ನ ಹೊರಗೆ ಗಸ್ತು ತಿರುಗೋಕೆ ಬಿಡ್ತಿದ್ವಿ...(ಅರ್ಧ ಖಾಲಿ ಅದಮೇಲೆ ಅವಳನ್ನ ಒಳಗೆ ಕರೆಯೋದು..!!!

)ಅಂತು ಇಂತು ಎಚ್ಚರಿಕೆಯಿಂದ (ಕೈ ಸುಟ್ಟು ಕೊಳ್ಳದೇ)cooking without fire ಸಮಾಪ್ತಿಗೊಳಿಸ್ತಇದ್ವಿ ..

.ಅದ್ನ ತಿನ್ನೋದು ಇನ್ನೊಂದು ತರಹದ ಸಂಭ್ರಮ..ಒಂದೇ ತಟ್ಟೆಯಲ್ಲಿ ಜನ!!

ಎರಡೇ ನಿಮಿಷದಲ್ಲಿ ಖಾಲಿ ಮಾಡ್ತಿದ್ವಿ..ಹೊಟ್ಟೆ ತುಂಬುತಿತ್ತಾ??ಅನ್ನೋ ಪ್ರಶ್ನೆಗೆ ಉತ್ತರ ಸಿಗದೇ ಹೋದ್ರೂ

ಕ್ಷಣಗಳನ್ನ ನೆನೆಸ್ಕೊಂಡ್ರೆ ಈಗಲೂ ಮನಸ್ಸು ತುಂಬಿ ಬರುತ್ತೆ...ನೀವು ಬೇಕಾದರೆ ಪ್ರಯತ್ನ ಮಾಡಿ.

.ಆದ್ರೆ ನೀವು ಹಾಗು ನಿಮ್ಮ ಇಸ್ತ್ರಿ ಪೆಟ್ಟಿಗೆಗೆ ಉಂಟಾಗಬಹುದಾದ ಹಾನಿಗೆ ,

ನಾವು

ಹಾಗು ನಮ್ಮ ವಿಧಾನ ಜವಾಬ್ದಾರಿಯಲ್ಲ.. !!

 
Monday, April 4, 2011

ನಿನ್ನೆ..ಇಂದು..ಮತ್ತು ನಾನು

                                               
                   

                                   


                                               
                                                 ಇವತ್ತು ನಿನ್ನೆಯ ಹಾಗಿಲ್ಲ         
                                                ಅಲ್ಲ...ಯಾವತ್ತಿನ ಹಾಗೂ ಇಲ್ಲ
                                                ಕೆದಕುತ್ತಿದ್ದೇನೆ ನನ್ನರಿವನ್ನ.....
                                                ಎಂದಿನಂತೆ.. ಧಾವಂತದಿಂದ ..
                                                ಫಲಾಫಲದ ನಿರೀಕ್ಷೆಯಿಲ್ಲದ ನಿರ್ಲಿಪ್ತತೆಯಿಂದ

                                                ಎಣಿಕೆಗೆ ಸಿಗದಷ್ಟು ಕೋಶಗಳ ಜನನ
                                                ಸ್ವಸ್ತ ಸ್ಪಷ್ಟಗತಿಯ ರಕ್ತಪರಿಚಲನ
                                                ದೋಷಮುಕ್ತ ದೃಢಕಾಯ
                                                ಆದರೂ ಇನ್ನೇನೋ ಗೋಜಲು ಗೋಜಲು
                                                ಅತ್ತ ನಿಶೆಯು ಅಲ್ಲದ ...ಇತ್ತ ಪ್ರಭೆಯು ಅಲ್ಲದ ..
                                                ಮಸುಕು ಮನಸ್ಥಿತಿ .....
                                                ನಿಜ..ಇವತ್ತು ನಿನ್ನೆಯ ಹಾಗಿಲ್ಲ ....


                                               ನಿನ್ನೆಯನ್ನೇ ನೆನದು ಮರುಗಿದ್ದೇನೆ..
                                               ಕೆನ್ನೆ ಕಂಬನಿಯ ಸ್ನೇಹಕ್ಕೆ ಸಾಕ್ಷಿಯಾಗಿದ್ದೇನೆ
                                               ಅಯ್ಯೋ....?!ನೆನಪಾಯಿತು ....
                                              ''ನಾನು ಅಳುವುದನ್ನೇ ಮರೆತಿದ್ದೆ''
                                               ಪ್ರೌಢಳೆಂಬ ಬಿಗುಮಾನದಿಂದ
                                               ನಗುವಿನಿಂದಲೇ ಗೆಲ್ಲುವೆನೆಂಬ ಭ್ರಮೆ ಯಿಂದ  
                                               ನಿಜ.. ನಿನ್ನೆಯ ಹಾಗೆ ನಾನಿಲ್ಲ..


                                              ಕಣ್ಣಿರಾಗಬೇಕು ಒಮ್ಮೊಮ್ಮೆ ..
                                              ಮನದ ಮಸುಕು ಕಳೆಯಲು..
                                              ನಗುವಿಗೆ ಬೆಲೆ ಬರಲು ..
                                              ಮಳೆನಿಂತ ಮುಗಿಲಿನಂತೆ ..
                                              ಸ್ಪಷ್ಟವಾಗುವುದು ಭಾವನೆಗಳ ಕಂತೆ ..
                                              ಸರಿ...ಇವತ್ತಿನಂತಿರುವುದಿಲ್ಲ  ಇನ್ನೆಂದು.....
                                                     

Sunday, February 6, 2011

ಮರಳುಗೂಡು

                                                                                                                                                                    


         
                                       ಅಲೆಗಳು ಜಿಗಿಜಿಗಿದು ಬರುತ್ತಿವೆ
                                       ನಿನ್ನ ನೆನಪುಗಳ ಹೊತ್ತು....
                                       ಮೈಯನ್ನು ತೋಯಿಸುತ್ತಿವೆ
                                       ಮನಸ್ಸನ್ನು ಸಹ....!!
                                       ಅಪ್ಪಿ ಕೊಳ್ಳಬೇಕೆನ್ನುವಷ್ಟರಲ್ಲಿ..
                                       ಕೈ ತಪ್ಪಿ ಓಡುತ್ತಿವೆ.....
                                       ಅವು ಬಂದಲ್ಲಿಗೆ....ನಿನ್ನಲ್ಲಿಗೆ....
                                     

                                       ಬೇಡ ಕಣೆ..ಒಮ್ಮೆಯಾದರೂ ....
                                       ಬಿಗಿದಪ್ಪಿ ಮುದ್ದಾಡಿಬಿಡು  ಬಿಡು..
                                       ಈ ಮರಳುಗೂಡನ್ನು
                                       ಪುಡಿಯಾದರೂ ಚಿಂತೆಯಿಲ್ಲಾ...
                                       ಮತ್ತೆ ನನ್ನನ್ನು ತಟ್ಟಿ ಕಟ್ಟಲು
                                       ಬಂದೇ ಬರುತ್ತಿಯಲ್ಲವೇ ನೀನು..??!!
                                       ನೆನಪಾಗಲ್ಲ .....ನಿಜವಾಗಿಯೂ ....!!!


                                   

Sunday, January 30, 2011

ಬಾಳಲು ಬಿಡಿ ತಮ್ಮಷ್ಟಕೆ ಸುಮ್ಮನೆ...ದೇವರು ಭಾವನೆಗಳನ್ನು ಮನುಷ್ಯನಲ್ಲಿ ತುಂಬುವುದರ ಜೊತೆಜೊತೆಗೆ ಸಂಬಧಗಳನ್ನು ಸೃಷ್ಟಿಸಿರಬೇಕು.ನಮ್ಮ ಮನಸ್ಥಿತಿಗೆ ಅನುಗುಣವಾಗಿ
ಬಾಂಧವ್ಯಗಳಿಗೆ ಹೆಸರಿಟ್ಟು ಅದನ್ನು ಗೌರವಿಸುವವರು ನಾವು ..ಆದರೆ ಪರಿವರ್ತನೆ ಜಗದ ನಿಯಮ ಎನ್ನುವಂತೆ ಸಂ ಬಂಧಗಳು ಬದಲಾಗುವ ಸಾದ್ಯತೆಗಳು,ಸನ್ನಿವೇಶಗಳು ಸಾಮಾನ್ಯ..ಈ ಮನೋಮಂದಲದಲ್ಲಿ ಎಲ್ಲ ತರಹದ ಸಂಬಂದಗಳಿಗೂ ಸ್ಥಾನವಿದೆ,ಅರ್ಥವಿದೆ..
ಅವುಗಳ ಬಗೆಗೆ ಕಾಳಜಿ ,ಜವಾಬ್ದಾರಿ ಎರಡೂ ಇದೆ .ಎಲ್ಲವೂ ತಿಳಿದು ಬಹುಮುಖ್ಯ ಸಮಯದಲ್ಲಿಯೇ ಇವೆಲ್ಲವನ್ನೂ ಮನಸ್ಸು ಮರೆಯುವುದೇಕೆ??ನಿರ್ಧಾರವನ್ನು ವಿಶ್ಲೇಷಿಸಲು ಇಷ್ಟಪಡದ ಜಾಣ ಕಿವುಡೇಕೆ ಈ ಬುದ್ದಿಗೆ?                                                                     
ಇದು ಖಂಡಿತ ಸರಿಯಲ್ಲ..ಸಂಬಂದಗಳಿಗೆ ಮೋಸ ಮಾಡಿದಾಗ ಸಂಬಧಿಗಳಿಗಾಗುವ ನೋವು ಅಗಾಧ..ಇದು ಮನಸ್ಸುಗಳನ್ನು ಮುರಿಯಲೂಬಹುದು .ಒಮ್ಮೆ ಯೋಚಿಸಿ .....ಒಂದು ಉತ್ತಮ ಬಾಂಧವ್ಯದ ಹೆಸರಿನಲ್ಲಿ ಬೆಸೆದುಕೊಂಡ ಬದುಕುಗಳು ಬೇರೆಯಾದಾಗ ಅಲ್ಲಿಯವರೆಗಿನ 
ಆ ಬೆಸುಗೆಗೆ ಏನೆನ್ನಬಹುದು..??!ಬರಿಯ ನಾಟಕವೆಂದಾ !!?..ಬದುಕು ಬರಿ ನಾಟಕವಲ್ಲ ...ಆದರೆ ಬದಲಾಗುವ ಭಾವನೆಗಳೇ ಬದುಕಲ್ಲ.....
                                                                                                                                                                                                                   
ಇಷ್ಟಪಡುವುದು  ಅಪರಾಧವಲ್ಲ ನಿಜ..ಆದರೆ ಅದಕ್ಕೆ ಪ್ರತಿಯಾಗಿ ಇಷ್ಟವನ್ನೇ ನಿರೀಕ್ಷಿಸುವುದು ಮೂರ್ಖತನ ..ಕಾಡದಿರಿ ಕಾಳಜಿ ತೋರುವ
ಮನಸ್ಸುಗಳನ್ನು ..ಕೊಲ್ಲದಿರಿ ಸಂಬಂಧಗಳನ್ನು ...ಸಾಧ್ಯವಾದರೆ ಹುಚ್ಚು ಕುದುರೆಯಾಗುವ ಮನಸ್ಸಿಗೆ ಕಡಿವಾಣ ಹಾಕಿ......                 
                                     
                                       ನಿಂತ ನೀರ ಕಲಕಬೇಡಿ ಕಲ್ಲುಗಳೇ
                                      ಹೂದಳಗಳ ಇರಿಯಬೇಡಿ ಮುಳ್ಳುಗಳೇ
                                      ಏನಿದೆಯೋ ಏನೋ ಅವಕೆ ತಮ್ಮದೇನೋ ..
                                      ಬಾಳಲು ಬಿಡಿ ತಮ್ಮಷ್ಟಕೆ ಸುಮ್ಮನೆ....

Thursday, December 23, 2010

ನಿರೀಕ್ಷಣೆ.....

                                      
                                      
                                       
                                       ದಿಟ್ಥಿಸುತ್ತಿರುವೆ  ಅಳೆಯಲಾಗದ  ದೂರವನ್ನ
                                                 ಬೆಟ್ಟಗಳ ಸಾಲು ...ನಿನ್ನ ನೆನಪಿನಂತೆಯೇ ..... 
                                                 ಒಂದರ ಹಿಂದೆ ಒಂದು ..ಅಲ್ಲೇ ಇಣುಕುವ ಇನ್ನೊಂದು ..
                                                 ಕಂಡು ಕಾಣದ ಮತ್ತೊಂದು .....
                                                 ಶಿಖರದ ತುದಿಯನ್ನಪ್ಪುತಿಹ ಭಾರ ಕಾರ್ಮೋಡ ...
                                                 ನನ್ನ ಮನಸ್ಸಿನಂತೆಯೇ ... 
                                                 ನಿಟ್ಟುಸಿರ ಜೊತೆಜೊತೆಗೆ ಧಾರಾಕಾರ ವರ್ಷಧಾರೆ
                                                 ದೃಶ್ಯ ಮಸುಕಾಯಿತು ....
                                                 ಬೆಟ್ಟಗಳ ಸಾಲು ಕಾಣದಾಯಿತು .
                                                 ಅಲ್ಲಲ್ಲ....ದೃಷ್ಟಿ  ಮಸುಕಾಯಿತು...
                                                 ಕಂಬನಿಯ ತೆರೆಯಿಂದ 
                                                 ನಿರೀಕ್ಷಣೆ ವ್ಯರ್ಥವೆಂಬ ಸತ್ಯದಿಂದ.....